ಅಮೇರಿಕಾ ದೇಶದಲ್ಲಿ ಹೆಜ್ಜೆ ಇಟ್ಟಾಗಲೇ ನನಗೆ ಅನಿಸಿದ್ದು ..

ಅಮೇರಿಕಾ ದೇಶದಲ್ಲಿ ಹೆಜ್ಜೆ ಇಟ್ಟಾಗಲೇ ನನಗೆ ಅನಿಸಿದ್ದು …. ಅಬ್ಬಾ ಇದು ಎಷ್ಟು ದೊಡ್ಡ ದೇಶ ಎಂದು. ಅಮೇರಿಕಾದಲ್ಲಿ ಎಲ್ಲವೂ ದೊಡ್ಡದು, ರಸ್ತೆಗಳು, ಅದರಮೇಲೆ ಚಲಿಸುವ ವಾಹನಗಳು, ಹೆಚ್ಚು ಕಮ್ಮಿ ಜನರು ( ಇದೂ ಒಂದು ಆಸಕ್ತಿಯುತವಾದ ವಿಷಯವೇ. ಎತ್ತರವಾಗಿ ಬ್ಲಾನ್ಡ್ ಬಣ್ಣದ ಕೂದಲಿದ್ದರೆ ಸ್ವಲ್ಪ ಜರ್ಮನ್ ಜೀನ್ ಇರಬಹುದು, ಇಟಾಲಿಯನ್ ಆಗಿದ್ರೆ ಕಪ್ಪು ಕೂದಲು ಸ್ವಲ್ಪ ಒತ್ತಿ ಒತ್ತಿ ಮಾತಾಡುತ್ತಾರೆ, ನಮ್ಮಂತೆ ಕುಳ್ಳಗಿದ್ದರೆ ಖಂಡಿತವಾಗಲೂ ಮೆಕ್ಸಿಕನ್ನರು …. ನಮ್ಮ ಭಾರತದಂತೆ ಅನೇಕತೆಯಲ್ಲಿ ಏಕತೆ )
ದೊಡ್ಡ ಗಾತ್ರ, ರೆಸ್ಟೋರೆಂಟ್ ಗಳಲ್ಲಿ ಕೊಡುವ ಊಟ ಕೂಡ ಜಾಸ್ತಿ.
ಇನ್ನೊಂದು ವಿಷಯ ತಕ್ಷಣ ಅರಿವಾಗುವುದೇನೆಂದರೆ ಇಲ್ಲಿ ಜನ ತುಂಬಾ ಕಡಿಮೆ. ರಸ್ತೆಯ ಇಕ್ಕೆಲ ಖಾಲಿ ಖಾಲಿ. ರಸ್ತೆಯ ಮೇಲೆ ವಾಹನಗಳೂ ಕಡಿಮೆ ( ಮುಖ್ಯ ರಸ್ತೆಗಳು ಊರಿನೊಳಗಡೆ ಇರುವಂಥವು, ಜಾಸ್ತಿ ಜನ ಇರುವ ಊರುಗಳು …. ನ್ಯೂ ಯಾರ್ಕ್ ನಗರ, ಸ್ಯಾನ್ ಫ್ರಾನ್ಸಿಸ್ಕೋ ನಗರಗಳು ಇಂಥ ಕಡೆ ನಮ್ಮ ಬೆಂಗಳೂರಿನಂತೆ ಟ್ರಾಫಿಕ್ ಹೆಚ್ಚು) ಮತ್ತೆ ಎಲ್ಲಾ ವಾಹನಗಳು ಶಿಸ್ತುಬದ್ಧವಾಗಿ ಅವಿರುವ ಲೇನ್ನಲ್ಲೆ ಚಲಿಸುತ್ತವೆ. ಲೇನ್ ಬದಲಾಯಿಸಲು ಸೂಚನೆ ಕೊಡಲೇ ಬೇಕು. ಕೊಟ್ಟರೂ ಕೊಡದಿದ್ದರೂ ಹಿಂದೆ ಇರುವವರು ಮುಂದೆ ನೋಡುತ್ತಲ್ಲೆ ಇರಬೇಕು …. ಲೇನ್ ಬದಲಾಗುವ ಸಮಯದಲ್ಲಿ ಅಪಘಾತವಾದರೆ … ಸೂಚನೆ ಕೊಟ್ಟಿದ್ದು ಕೊಡದಿದ್ದರ ಬಗ್ಗೆ ಯೋಚಿಸಿ ಫಲವೇನು. ಅದಕ್ಕೆ ವಾಹನ ಚಲಿಸಲು ಲೈಸನ್ಸ್ ಪಡೆಯುವಾಗಲೇ ಡಿಫೆನ್ಸಿವ್ ಡ್ರೈವಿಂಗ್ ಬಗ್ಗೆ ಪಾಠವಾಗಿರುತ್ತದೆ. ಒಮ್ಮೆ ಈಥರ ಅಪಘಾತವಾದರೆ ಎಷ್ಟೇ ಚಿಕ್ಕದಾಗಿರಲಿ, ವಾಹನದ ವಿಮೆಯ ಬೆಲೆ ಏರುತ್ತದೆ. ಪೊಲೀಸ್ಗೆ ಹೇಳಲೇ ಬೇಕಾಗುತ್ತದೆ …. ಇನ್ನು ವಾಹನದ ರಿಪೇರಿ ಖರ್ಚು. ಈ ಎಲ್ಲಾ ವಿಷಯಗಳಿಂದಾಗಿ ಇಲ್ಲಿ ವಾಹನ ಚಲಿಸುವಲ್ಲಿ 99% ಜನ ನಿಯಮಗಳನ್ನು ಪಾಲಿಸುತ್ತಾರೆ. ಬೆಂಗಳೂರಿನಲ್ಲೂ ಇದೆಯಲ್ಲಾ ನಿಯಮಗಳು ಎಂದು ನೀವು ಹೇಳಬಹುದು. ಇಲ್ಲಿ ನಿಯಮ ಪಾಲಿಸದಿದ್ದರೆ ಪೋಲೀಸಿನವನಿಗೆ ಲಂಚ ಕೊಡಲಾಗುವುದಿಲ್ಲ. ಪೋಲೀಸಿನವನು ರಸ್ತೆ ಬದಿಯ ಮರಗಿಡಗಳ ಮರೆಯಲ್ಲಿ ಕಾಯುತ್ತಾ ಕುಳಿತಿರುತ್ತಾನೆ, ತನ್ನ ಸ್ಪೀಡ್ ರೇಡಾರ್ ಒಡನೆ. ನೀವು ಸೂಚಿಸಿರುವ ಸ್ಪೀಡ್ ಕಿಂತ ಜಾಸ್ತಿ ವೇಗವಾಗಿ ಚಲಿಸಿದಲ್ಲಿ, ಆತ ನಿಮ್ಮ ಹಿಂಬಾಲಿಸುತ್ತಾನೆ. ಹಾಗೆ ಹಿಂಬಾಲಿಸಿದಾಗ ಏನು ಮಾಡಬೇಕೆನ್ನುವುದನ್ನು ಕೂಡ ಲೈಸನ್ಸ್ ಗಳಿಸುವ ಮುನ್ನದ ಪಾಠದಲ್ಲಿ ಹೇಳಿರುತ್ತಾರೆ. ಅದರಂತೆ ಪೊಲೀಸನು ತನ್ನ ಕಾರ್ ನಲ್ಲಿ ನಮ್ಮನ್ನು ಹಿಂಬಾಲಿಸಿದಾಗ, ನಮ್ಮ ಕಾರನ್ನು ರಸ್ತೆ ಬದಿಗೆ ( ಶೋಲ್ಡರ್) ನಿಲ್ಲಿಸಲೇ ಬೇಕು. ಆತನೂ ಸ್ವಲ್ಪ ದೂರದಲ್ಲಿ ನಿಲ್ಲುತ್ತಾನೆ. ಅವನಾಗಿ ನಮ್ಮ ಕಿಡಕಿಯ ಬಳಿಗೆ ಬರುವ ತನಕ ನಾವೂ ಗಾಡಿಯಿಂದ ಈಚೆ ಇಳಿಯಬಾರದು. ಆತ ಕೇಳಿದಾಗ ನಮ್ಮ ಲೈಸನ್ಸ್, ಇನ್ಶೂರೆನ್ಸ್ ಮತ್ತು ಕಾರ್ ರಿಜಿಸ್ಟ್ರೇಷನ್ ತೋರಬೇಕು. ಆಗ ಆತ ಎಲ್ಲವನ್ನೂ ಪರಿಶೀಲಿಸಿ ಒಮ್ಮೊಮ್ಮೆ ಹೊಸ ವಾಹನ ಚಾಲಕರಾಗಿದ್ದರೆ ಎಚ್ಚರಿಸಿ ಹೋರಡಲು ಹೇಳುತ್ತಾರೆ ಇಲ್ಲದಿದ್ದರೆ ಒಂದು ಟಿಕೆಟ್ ಬರೆದು ಕೊಡುತ್ತಾರೆ. ಅದನ್ನು ನಾವು ಕೋರ್ಟಿಗೆ ಹೋಗಿ ವಾದಿಸಬಹುದು ನಮಗೆ ನಾವು ತಪ್ಪು ಮಾಡಿಲ್ಲ ಎಂದು ನಂಬಿಕೆ ಇದ್ದರೆ. ಇಲ್ಲದಿದ್ದರೆ ಫೈನ್ ದುಡ್ಡನ್ನು ಕಟ್ಟಬೇಕು. ವಾದಮಾಡಲು ವಕೀಲರು ಬೇಕಿಲ್ಲ. ಕೋರ್ಟ್ ಕೂಡ ಹತ್ತಿರದ ಠಾಣೆಯ ಬಳಿಯೇ ಇರುತ್ತೆ. ಎಲ್ಲಾ ಸೇರಿ ಒಂದ್ ಎರಡು ತಿಂಗಳುಗಳಾಗಬಹುದು. ಎಲ್ಲದಕ್ಕೂ ಒಂದು ವ್ಯವಸ್ಥೆ, ಎಲ್ಲವೂ ವ್ಯವಸ್ಥಿತವಾಗಿದೆ. ಇದ್ದಕ್ಕಿದ್ದಂತೆ ಏನೂ ಏರುಪೇರಾಗದು.
ಆದರೆ ಇದೆ ಪೊಲೀಸರು ಆಫ್ರಿಕನ್ ಅಮೆರಿಕನ್ನರನ್ನು ಶಂಕಿಸುವುದು ಇದೆ. ಇತ್ತೀಚಿಗೆ ನಡೆದ ಹಲವಾರು ಘಟನೆಗಳನ್ನು ನೀವು ಯೌಟ್ಯೂಬ್ ನಲ್ಲಿ ನೋಡಿರಬಹುದು ಪತ್ರಿಕೆಗಳಲ್ಲಿ ಓದಿರಬಹುದು. ನಾನು ಕೇಳಿ ತಿಳಿದಿರುವಂತೆ ಅಮೆರಿಕಾದ ಅತಿ ಪೂರ್ವದ ರಾಜ್ಯಗಳು ಮತ್ತು ಅತಿ ಪಶ್ಚಿಮದ ರಾಜ್ಯಗಳು ಸ್ವಲ್ಪಮಟ್ಟಿಗೆ ಶಿಕಾಗೋ ಸುತ್ತ ಮುತ್ತ ಪ್ರದೇಶಗಳು ಇಲ್ಲಿ ರೇಸಿಯಲ್ discrimination ಅಷ್ಟಾಗಿ ಇಲ್ಲ. ನಾನು ನ್ಯೂಜೆರ್ಸಿ ಅಲ್ಲಿದ್ದ 17 ವರುಷ ಒಮ್ಮೆಯೂ ಈ ರೀತಿಯ ವರ್ತನೆ ಅನುಭವಿಸಿಲ್ಲ. ಆದರೆ ಅಮೆರಿಕಾದ ಮಧ್ಯ ಭಾಗದಲ್ಲಿ ಇದು ತುಂಬಾ ಇದೆ ಎಂದು ಹೇಳುತ್ತಾರೆ. ತಮ್ಮ ನಾಡಿನಿಂದ, ಬೇಸತ್ತು, ವಲಸೆ ಬಂದ ಜನತೆ ಕಟ್ಟಿದ ದೇಶವಿದು. ಬಹಳಷ್ಟು ಮಂದಿ ಕಷ್ಟಪಟ್ಟು ದುಡಿಯುತ್ತಾರೆ. ಆದ್ದರಿಂದ ದುಡಿಯುವವರನ್ನು ಗೌರವಿಸುತ್ತಾರೆ. ಆದರೆ ಈಗಿರುವ ಜನತೆ …. ಕಷ್ಟ ಪಡುವುದನ್ನು ಮರೆತಂತಿದೆ. ಆದರೂ ಪರಿಸ್ಥಿತಿ ಮೇರೇ ಮೀರಿಲ್ಲ ಇನ್ನೂ….
ಇನ್ನೊಂದು ಖೇದದ ವಿಷಯ ಯೂರೋಪಿಯನ್ನರು ಬರುವ ಮುನ್ನ ಇಲ್ಲಿ ಇದ್ದ ಜನಾಂಗದ್ದು. ನೇಟಿವ್ ಅಮೆರಿಕನ್ ಅಂತ ಕರಿಯಲ್ಪಡುವವರು. ಅವರ ಸಂಸ್ಕೃತಿ ಕೇವಲ ಬೆರಳೆಣಿಕೆಯಷ್ಟು ರೆಸೆರವಶನ್ ಜಾಗದಲ್ಲಿ ಉಳಿದಿದೆ. ಸಮಯ ಸಿಕ್ಕಾಗ ಈ ಎರಡೂ ಸಂಸ್ಕೃತಿಗಳು ಒಂದು ನಾಡಿನಲ್ಲಿ ಕಲೆತಾಗ ಆದ ಘಟನೆಗಳ ಬಗ್ಗೆ ಓದಿ. ಬಹಳ ಖೇದವಾಗುತ್ತೆ. ಪದೇ ಪದೇ ಪರದೇಶಿಗಳು ಆಳಿದ ನಮ್ಮ ಭಾರತದ ಸಂಸ್ಕೃತಿಗೆ ಈ ಗತಿ ಬರಲಿಲ್ಲವಲ್ಲ ಎಂದು ಸಮಾಧಾನವಾಗುತ್ತೆ. ಮತ್ತೆ ಹಾಗೇಕಾಯಿತು ಎಂಬ ಪ್ರಶ್ನೆಯೂ ಏಳುತ್ತೆ. ಉತ್ತರ ಇನ್ನೂ ಹುಡುಕುತ್ತಿದ್ದೇನೆ. ನಮ್ಮ ಸಂಸ್ಕೃತಿ ಅಮೆರಿಕನ್ನರಿಗಿಂತ ಹಳೆಯದಾಗಿರುವುದು ಕಾರಣವೇ?
ಇಂದಿಗೆ ಇಷ್ಟು ಸಾಕು … 😊

This entry was posted in Posts. Bookmark the permalink.

Leave a Reply

Your email address will not be published. Required fields are marked *